ತೊಟ್ಲುಮುಳ್ಳುಗಿಡ -
ಕ್ಯಾಪರಿಡೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಇದರ ವೈe್ಞÁನಿಕ ಹೆಸರುಕ್ಯಾಪರಿಸ್ ಗ್ರ್ಯಾಂಡೊಫ್ಲೋರ. ಇದು ಸ್ವಾಭಾವಿಕವಾಗಿ ಭಾರತ, ಶ್ರೀಲಂಕಾ, ಬರ್ಮ ಮುಂತಾದ ಉಷ್ಣಪ್ರದೇಶಗಳಲ್ಲಿ ಬೆಳೆಯುತ್ತದೆ. ಭಾರತದಲ್ಲಿ ಕರ್ನಾಟಕ ಮತ್ತು ಮಲಬಾರ್ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಹೆಚ್ಚು ಕೊಂಬೆಗಳಿಂದೊಡಗೂಡಿ ಪೊದೆಯಂತೆ ಬೆಳೆಯುವ ಗಿಡ ಇದು. ಗಿಡವೆಲ್ಲ ಮುಳ್ಳಿನಿಂದ ಕೂಡಿದೆ. ಇದರ ಎಲೆಗಳು ಸರಳ ರೀತಿಯವು. ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಗಳ ಆಕಾರ ಅಂಡದಂತೆ; ಅಂಚು ಅಲೆಯಂತೆ ಉಂಟು. ಎಲೆಯ ಮೇಲ್ಭಾಗ ರೋಮರಹಿತವಾಗಿಯೂ ನುಣುಪಾಗಿಯೂ ಇದೆಯಾದರೆ ತಳಭಾಗ ರೋಮಯುಕ್ತವಾಗಿದೆ. ಎಲೆಯ ತೊಟ್ಟಿನ ಎರಡು ಪಾಶ್ರ್ವಗಳಲ್ಲಿ 2 ಮುಳ್ಳುಗಳುಂಟು. ಇವೇ ವೃಂತಪತ್ರಗಳು (ಸ್ಟಿಪೂಲ್ಸ್). ಹೂಗಳು ದ್ವಿಲಿಂಗಿಗಳು. ಪ್ರತಿ ಹೂವಿನಲ್ಲೂ ತಿಳಿಹಸಿರು ಬಣ್ಣದ 4 ಪುಷ್ಪಪತ್ರಗಳು, ಬಿಳಿಬಣ್ಣದ 4 ದಳಗಳು, ಅನೇಕ ಕೇಸರಗಳು, 2 ಕಾರ್ಪೆಲುಗಳಿಂದ ರಚಿತವಾದ ಉಚ್ಛಸ್ಥಾನದ ಅಂಡಾಶಯ ಉಂಟು. ಅಂಡಾಶಯಕ್ಕೆ ಉದ್ದವಾದ ತೊಟ್ಟು (ಗೈನೊಫೋರ್) ಇದೆ. ದಳಗಳೂ ಕೇಸರಗಳೂ ಬಿಡಿಬಿಡಿಯಾಗಿವೆ. ಫಲ ಬೆರಿ ಮಾದರಿಯದು. ಇದರ ಬಣ್ಣ ಕಿತ್ತಳೆ. ಬೀಜಗಳು ಅಸಂಖ್ಯ ಕಾಯಿಯ ತಿರುಳಿಗೆ ಬಿಳಿಬಣ್ಣವೂ ಒಂದು ತೆರನ ಗಬ್ಬು ವಾಸನೆಯೂ ಉಂಟು.

ತೊಟ್ಲುಮುಳ್ಳು ಗಿಡದ ಎಲೆಗಳನ್ನು ಪ್ರತಿ ಉದ್ರೇಕಕಾರಿ (ಕೌಂಟರ್ ಇರಿಟೆಂಟ್) ಆಗಿಯೂ ಹುಣ್ಣು, ಊತ ಮತ್ತು ಮೂಲವ್ಯಾಧಿಗಿ ಬೆಚ್ಚಾರವಾಗಿಯೂ ಉಪಯೋಗಿಸುತ್ತಾರೆ. ಬೇರಿನತೊಗಟೆ ಕಹಿ ಉಪಶಾಮಕ, ಜೀರ್ಣಕಾರಿ, ಹಾಗೂ ಶ್ಲೇಷ್ಮವಿರೋಧಕ. ಇದನ್ನು ಕಾಲರಾ ರೋಗಕ್ಕೆ ಮದ್ದಾಗಿ ಉಪಯೋಗಿಸುತ್ತಾರೆ. ಇದರಲ್ಲಿ ಲೋಳೆಯಂತಿರುವ ಫೈಟೋಸ್ಟಿರಾಲ್ ಎಂಬ ಕ್ಷಾರವಿದೆ. ತೊಟ್ಲುಮುಳ್ಳು ಗಿಡದ ಕಾಂಡವನ್ನು ಸೌದೆಯಾಗಿ ಬಳಸುವುದುಂಟು. ಹಸಿರು ಕಾಯಿಗಳಿಂದ ಉಪ್ಪಿನಕಾಯಿ ತಯಾರಿಸುವುದೂ ಇದೆ.
(ಎ.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ